ಚಿಕೊರಿ
ಆಸ್ಟರೇಸಿ ಕುಟುಂಬಕ್ಕೆ ಸೇರಿದ ಒಂದು ಬಹುವಾರ್ಷಿಕ ಮೂಲಿಕೆ ಸಸ್ಯ.  ಸಕೊರಿ ಪರ್ಯಾಯ ನಾಮ. ಸಿಕೋರಿಯಮ್ ಇಂಟಿಬಸ್ ವೈಜ್ಞಾನಿಕ ಹೆಸರು. ಚಿಕೋರಿಯನ್ನು ವಿಶೇಷವಾಗಿ ಅದರ ಬೇರಿಗೋಸ್ಕರ ಬೆಳೆಸುತ್ತಾರೆ. ಚಿಕೊರಿಯ ಎಳೆಯ ಬೇರುಗಳನ್ನು ಕ್ಯಾರಟ್ ಗೆಡ್ಡೆಯಂತೆ ಬೇಯಿಸಿ ಮೊಸರು, ಮೆಣಸು ಮತ್ತು ಉಪ್ಪಿನೊಂದಿಗೆ ಸೇರಿಸಿ ತಿನ್ನುವುದುಂಟು. ಎಲೆಗಳನ್ನು ತರಕಾರಿಯಾಗಿ ಉಪಯೋಗಿಸಬಹುದು. ಎಲ್ಲಕ್ಕಿಂತ ಹೆಚ್ಚಾಗಿ ಇದರ ಬೇರುಗಳನ್ನು ಒಣಗಿಸಿ, ಹುರಿದು, ಪುಡಿಮಾಡಿ ಕಾಫಿಪುಡಿಯ ಜೊತೆ ಮಿಶ್ರ ಮಾಡುವುದರಿಂದ ಇದಕ್ಕೆ ಆರ್ಥಿಕ ಪ್ರಾಮುಖ್ಯ ಉಂಟು. ಹೀಗೆ ಬೆರೆಸುವುದರಿಂದ ಕಾಫಿಯ ಬಣ್ಣ, ದಟ್ಟತೆ ಹಾಗೂ ರುಚಿಗಳು ಹೆಚ್ಚುತ್ತವೆ. ಚಿಕೊರಿಗೆ ಔಷಧೀಯ ಮಹತ್ತ್ವವೂ ಇದೆ. ಉದ್ಯಾನಗಳಲ್ಲಿ ಇದನ್ನು ಅಲಂಕಾರ ಸಸ್ಯವಾಗಿಯೂ ಬೆಳೆಸುತ್ತಾರೆ. ಇದರ ತವರು ಯೂರೋಪ್. 19ನೆಯ ಶತಮಾನದಿಂದೀಚೆಗೆ ಇದನ್ನು ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲೂ ಬೆಳೆಸಲಾಗುತ್ತಿದೆ. ಭಾರತದಲ್ಲೂ ಇದರ ಅಲ್ಪಸ್ವಲ್ಪ ಬೇಸಾಯ ಉಂಟು.

ಚಿಕೊರಿ 3'-6' ಎತ್ತರ ಬೆಳೆಯುವ ಗಿಡ. ಇದರ ಬೇರು ಉದ್ದವಾಗಿಯೂ ರಸಭರಿತವಾಗಿಯೂ ಇದೆ. ಎಲೆಗಳು ಅಗಲ, ಆಯತಾಕಾರ ಅಥವಾ ಭರ್ಜಿಯಾಕಾರ, ಪ್ರತಿ ಎಲೆಯಲ್ಲಿ ಅನೇಕ ಹಾಲೆಗಳಿವೆ. ಅಂಚು ಗರಗಸದಂತೆ. ಹೂಗಳು ಹೊಳೆಯುವ ನೀಲಿಬಣ್ಣದವು. ಚಿಕೊರಿಯಲ್ಲಿ ವಿಟ್‍ಲೂಫ್, ಕ್ರಿಸ್‍ಮಾಸ್ ಮತ್ತು ಸಾಲಡ್ ಎಂಬ ಮೂರು ಬಗೆಗಳಿವೆ.

ಇದರ ಬೇಸಾಯ ಕ್ಯಾರಟ್ ಬೇಸಯದಂತೆಯೆ ಇದೆ. ಇದನ್ನು ಸಾಮಾನ್ಯವಾಗಿ ಎಲ್ಲ ತರದ ಮಣ್ಣಿನಲ್ಲಿ ಬೆಳೆಸಬಹುದಾದರೂ ಮರಳು ಮಿಶ್ರಿತ ಗೋಡುಮಣ್ಣು ಬಹಳ ಉತ್ತಮ. ಚಿಕೊರಿಯನ್ನು ಅದರ ಸೊಪ್ಪಿಗಾಗಿ ಬೆಳೆಸುವಾಗ ಭೂಮಿಯನ್ನು ಚೆನ್ನಾಗಿ ಮತ್ತು ಹೆಂಟೆಗಳನ್ನು ಒಡೆದು, ಕಸಕಡ್ಡಿಯನ್ನು ತೆಗೆದು ಮಟ್ಟಸ ಮಾಡಬೇಕು. ಬೀಜಗಳನ್ನು ಕೂರಿಗೆಯಿಂದ ಇಲ್ಲವೆ ಕೈಯಿಂದ ಬಿತ್ತಬಹುದು. ಎಕರೆಗೆ 7-12 ಪೌಂಡ್ ಬಿತ್ತನೆ ಬೇಕಾಗುತ್ತದೆ. ಒಂದು ವರ್ಷ ವಯಸ್ಸಿನ ಸಸಿಗಳಿಂದ ಎಲೆಗಳನ್ನೂ ತೆಗೆದು ಉಪಯೋಗಿಸಬಹುದು. ಬೆಳೆ 5-10 ವರ್ಷಗಳವರೆಗೂ ಇರುತ್ತದ. ಚಿಕೊರಿಯನ್ನು ಬೇರಿಗೋಸ್ಕರ ಬೆಳೆಸುವಾಗ ಬೀಜಗಳನ್ನು 22 ಅಂತರದ ಸಾಲುಗಳಲ್ಲಿ 9-12 ಕ್ಕೆ ಒಂದರಂತೆ ನೆಡಬೇಕು. ಈ ರೀತಿ ನೆಡಲು ಒಂದು ಎಕರೆಗೆ 2-2 1/2 ಪೌಂಡ್ ಬಿತ್ತನೆ ಬೇಕಾಗುವುದು. ಬೇರುಗಳನ್ನು ಚೆನ್ನಾಗಿ ಬಲಿತಮೇಲೆ ಅಗೆದು ತೆಗೆದು ಒಣಗಿಸಬೇಕು. ಅಗೆಯುವುದು ತಡವಾದಲ್ಲಿ ಬೇರುಗಳನ್ನು ನಾರಿನಂತಾಗಿ ತೂಕ ಕಡಿಮೆಯಾಗುವ ಸಂಭವ ಉಂಟು. ನ್ಯೂಜಿûಲೆಂಡಿನಲ್ಲಿ ಒಂದು ಎಕರೆಯ ಸರಾಸರಿ ಇಳುವರಿ 10-11 ಟನ್ನುಗಳು. ಭಾರತದಲ್ಲಿ ಸ್ವಲ್ಪ ಕಡಿಮೆ. ಬೇರಿಗೋಸ್ಕರ ಬೆಳೆಸುವಾಗ ಬೀಜವಾಗಲು ಬಿಡುವುದಿಲ್ಲ. ಬೇರುಗಳನ್ನು ಬಿಸಿಲಿನಲ್ಲಾಗಲಿ ಬೆಂಕಿಯ ಶಾಖದಲ್ಲಾಗಲಿ ಒಣಗಿಸಬಹುದು. ಬಿಸಿಲಿನಲ್ಲಿ ಬೇರುಗಳು ನೊಡಲು ಚೆನ್ನಾಗಿರುತ್ತವೆ.
(ಬಿ.ಎ.ಸಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ